ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ !


24-06-2017 503

ಬೆಂಗಳೂರು: ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ 50 ಸಾವಿರ ರೂಪಾಯಿಗಳ ವರೆಗಿನ ಸಾಲಮನ್ನಾ ಮಾಡಿದ್ದು ಸ್ವಾಗತಾರ್ಹ. ರಾಷ್ಟ್ರೀಕೃತ ಬ್ಯಾಂಕ್‍ ಗಳಲ್ಲಿನ ಸಾಲಮನ್ನಾಗೆ ಆಗ್ರಹಿಸಿ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದ ನಿಯೋಗ ವಿಧಾನಸೌಧಕ್ಕೆ ಭೇಟಿ ನೀಡಿ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ. ಸಾಲಮನ್ನಾಗೆ ಅಭಿನಂದನೆ ಸಲ್ಲಿಸಿದ ನಿಯೋಗ, ಸಹಕಾರ ಸಂಘಗಳಲ್ಲಿನ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಎತ್ತಿನಹೊಳೆ ಸೇರಿದಂತೆ ಇತರ ನೀರಾವರಿ ಯೋಜನೆಗಳನ್ನು ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸುವಂತೆ ಮನವಿ ಮಾಡಿತು. ಮುಖ್ಯಮಂತ್ರಿಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ಮಾತನಾಡಿ, ಸಾಲಮನ್ನಾ ಸಂಬಂಧ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇವೆ. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಸಿಎಂಗೆ ಮನವಿ ಮಾಡಿದ್ದೇವೆ. ಸಹಕಾರಿ ಬ್ಯಾಂಕ್‍ ಗಳಲ್ಲಿರುವ ಬಾಕಿ ಉಳಿದ ಸುಮಾರು ಎರಡೂವರೆ ಸಾವಿರ ಕೋಟಿ ಮನ್ನಾ ಆಗಬೇಕೆಂದು ಹೇಳಿದ್ದೇವೆ. ಇದರ ಬಗ್ಗೆ ಚರ್ಚೆ ಮಾಡುತ್ತೇನೆಂದು ಭರವಸೆ ನೀಡಿದ್ದಾರೆ ಎಂದರು. ಅಲ್ಲದೆ ನೀರಾವರಿ ಯೋಜನೆಗಳು ತ್ವರಿತವಾಗಿ ಆಗಬೇಕೆಂದು ಹೇಳಿದ್ದೇವೆ. ಎತ್ತಿನಹೊಳೆಯ ಯೋಜನೆ ಸಂಬಂಧ ಇನ್ನು ಹತ್ತು ದಿನದಲ್ಲಿ ತಾಂತ್ರಿಕ ವರದಿ ಬರಲಿದೆ. ಆದಷ್ಟು ಬೇಗ ಯೋಜನೆ ಅನುಷ್ಠಾನಕ್ಕೆ ಮನವಿ ಮಾಡಿದ್ದು ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.


ಒಂದು ಕಮೆಂಟನ್ನು ಬಿಡಿ