ಪ್ಲಾಸ್ಟಿಕ್ ಚೇರ್ಸ್ ಕಾರ್ಖಾನೆಗೆ ಆಕಸ್ಮಿಕ ಬೆಂಕಿ !


24-06-2017 988

 ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ಪ್ಲಾಸ್ಟಿಕ್ ಪೀಠೋಪಕರಣಗಳ ಕಾರ್ಖಾನೆಗೆ ನಿನ್ನೆ ರಾತ್ರಿ ಅಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೀಣ್ಯಾ ಬಳಿಯ ತಿಗಳರಪಾಳ್ಯ ಮುಖ್ಯ ರಸ್ತೆಯಲ್ಲಿರುವ ಪ್ಲಾಸ್ಟಿಕ್ ಚೇರ್ ಇನ್ನಿತರ ಪೀಠೋಪಕರಣಗಳ ಜೆಸಿಎಲ್ ಪ್ಲಾಸ್ಟಿಕ್ ಚೇರ್ಸ್ ಕಾರ್ಖಾನೆಯಲ್ಲಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ವಸ್ತುಗಳು ಬೆಂಕಿಗಾಹುತಿಯಾಗಿವೆ. ನಿನ್ನೆ ಸಂಜೆ ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ತೆರಳಿದ ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ದಟ್ಟ ಹೊಗೆ ಬರುವುದನ್ನು ಗಮನಿಸಿದ ಸ್ಥಳೀಯರು ಆಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗ್ನಿಶಾಮಕ ಆಗಮಿಸುವಷ್ಟರಲ್ಲಿ ಬೆಂಕಿ ಇಡೀ ಕಾರ್ಖಾನೆ ಆವರಿಸಿದ್ದು ಒಂದರಿಂದ ಒಂದರಂತೆ ಒಟ್ಟು 8 ಅಗ್ನಿಶಾಮಕ ವಾಹನಗಳು ಧಾವಿಸಿ ತಡರಾತ್ರಿಯವರೆಗೆ ಶ್ರಮಿಸಿ ಬೆಂಕಿ ನಂದಿಸಿವೆ. ಕಾರ್ಖಾನೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನೀರಜ ಮಿಥಲ್ ಎಂಬುವರಿಗೆ ಸೇರಿದ ಕಾರ್ಖಾನೆ ಇದಾಗಿದ್ದು, ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ. ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆ ನಗರದ ಈಜಿಪುರದ 20ನೇ ಹೆಚ್ ಕ್ರಾಸ್‍ನಲ್ಲಿರುವ ಗ್ಯಾಲಕ್ಸಿ ಮೆನ್ಸ್ ಸಲೂನ್‍ಗೆ ನಿನ್ನೆ ರಾತ್ರಿ ಅಕಸ್ಮಿಕ ಬೆಂಕಿ ತಗುಲಿ ಟಿವಿ ಇನ್ನಿತರ ಪೀಠೋಪಕರಣಗಳು ಸುಟ್ಟು ಹೋಗಿವೆ, ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿ ಈ ದುರ್ಘಟನೆ ಸಂಭವಿಸಿದ್ದು, ಆಗ್ನಿಶಾಮಕದಳದ ವಾಹನವೊಂದು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ.


ಒಂದು ಕಮೆಂಟನ್ನು ಬಿಡಿ