ಗುತ್ತಿಗೆ ಪೌರ ಕಾರ್ಮಿಕರ ಮುಷ್ಕರ ವಾಪಸ್ !


13-06-2017 1324

ಬೆಂಗಳೂರು:- ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂ ಗೊಳಿಸಿ ಸರ್ಕಾರದಿಂದಲೇ ನೇರವಾಗಿ ವೇತನ ನೀಡುವ ಭರವಸೆಯನ್ನು ಸರ್ಕಾರ ನೀಡಿದ್ದರಿಂದ ಸೋಮವಾರದಿಂದ ನಡೆಸುತ್ತಿದ್ದ ಅನಿರ್ದಿಷ್ಠ ಮುಷ್ಕರವನ್ನು ಗುತ್ತಿಗೆ ಪೌರ ಕಾರ್ಮಿಕರು ವಾಪಸ್ಸು ಪಡೆದು ವಿಜಯೋತ್ಸವ ಆಚರಿಸಿದ್ದಾರೆ. ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ, ಪೌರಾಡಳಿತ ಸಚಿವ ಪ್ರಕಾಶ್ ಖಂಡ್ರೆ ಅವರು ಗುತ್ತಿಗೆ ಪೌರ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದ ಬನ್ನಪ್ಪ ಪಾರ್ಕ್‍ಗೆ ಭೇಟಿ ನೀಡಿ ಪೌರ ಕಾರ್ಮಿಕರ ಅಹವಾಲು ಸ್ವೀಕರಿಸಿ ಮುಂದಿನ ದಿನಗಳಲ್ಲಿ ಕಾಯಂಗೊಳಿಸುವ ಭರವಸೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸದ್ಯದಲ್ಲೇ ಮಾತುಕತೆ ನಡೆಸಿ, ರಾಜ್ಯದಲ್ಲಿಸೇವೆ ಸಲ್ಲಿಸುತ್ತಿರುವ ಎಲ್ಲಾ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಭರವಸೆ ನೀಡುತ್ತಿದ್ದಂತೆ ಮುಷ್ಕರ ನಿರತ ಪೌರ ಕಾರ್ಮಿಕರು ಸಂಭ್ರಮಾಚರಣೆ ಮಾಡಿದರು. ಪೌರಕಾರ್ಮಿಕರ ಮುಷ್ಕರದಿಂದ ಎರಡು ದಿನಗಳಿಂದ ನಗರದಲ್ಲಿ ಸ್ವಚ್ಛತಾ ಕಾರ್ಯ ಸ್ಥಗಿತಗೊಂಡು ಎಲ್ಲೆಂದರಲ್ಲಿ ಕಸದ ರಾಶಿ ನಿರ್ಮಾಣವಾಗಿತ್ತು. ಎರಡೇ ದಿನದಲ್ಲಿ 8 ಸಾವಿರ ಟನ್ ಕಸ ವಿಲೇವಾರಿಯಾಗದೆ ಉಳಿದಿತ್ತು. ಮಾಧ್ಯಮಗಳಲ್ಲಿ ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮೇಯರ್ ಅವರು ತಕ್ಷಣ ಸಚಿವರೊಂದಿಗೆ ಬನ್ನಪ್ಪ ಪಾರ್ಕ್‍ಗೆ ತೆರಳಿ ಮಾತುಕತೆ ನಡೆಸಿ, ಬಾಕಿ ಎಲ್ಲಾ ಹಣವನ್ನು ತಕ್ಷಣ ಬಿಡುಗಡೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಚರ್ಚಿಸಿ ಈಡೇರಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ನೌಕರರು ಒಪ್ಪಿ, ತಕ್ಷಣ ಕೆಲಸಕ್ಕೆ ಹಾಜರಾಗುವುದಾಗಿ ಭರವಸೆ ನೀಡಿದರು. ಇದರಿಂದ ಬಿಬಿಎಂಪಿಯ ಮಾನ ಹರಾಜಾಗುವುದು ತಪ್ಪಿದಂತಾಗಿದೆ. ಈ ಹಿಂದೆ ಇದೇ ಕಸದ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿತ್ತು.  ಹೈಕೋರ್ಟ್ ಆದೇಶದಂತೆ ನಮ್ಮನ್ನು ಖಾಯಂಗೊಳಿಸಿ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿ 5 ಸಾವಿರ ಕಾರ್ಮಿಕರು ಧರಣಿ ಆರಂಭಿಸಿದ್ದರು. ಪೌರಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಹೆಚ್.ಆಂಜನೇಯ ನಮ್ಮ ಸರ್ಕಾರ ಪೌರಕಾರ್ಮಿಕರ ಸರ್ಕಾರ. ಗುತ್ತಿಗೆ ಪದ್ಧತಿಯನ್ನ ರದ್ದು ಮಾಡಿ ಪೌರಕಾರ್ಮಿಕರ ಖಾತೆಗೆ ನೇರವಾಗಿ ಸಂಬಳವನ್ನು ಬಿಬಿಎಂಪಿ ಹಾಕುತ್ತದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು. ನಾನು ಹೋರಾಟದ ಹಿನ್ನೆಲೆಯಿಂದ ಬಂದವನು. ಗುತ್ತಿಗೆ ಮಾಫಿಯಾ ರದ್ದಾಗಬೆಕು ಗುತ್ತಿಗೆದಾರರು ಪಾಸ್ ಬುಕ್ ಸಹಿ ಹಾಕಿಸಿಕೊಂಡು ಹಣವನ್ನ ಲೂಟಿ ಮಾಡುತ್ತಿದ್ದರು. ಇಂದಿನಿಂದ ಆ ಪದ್ದತಿ ರದ್ದಾಗುತ್ತದೆ. ಗುತ್ತಿಗೆ ಪದ್ದತಿಯನ್ನ ರದ್ದು ಮಾಡಿ ಕಾರ್ಮಿಕರ ಖಾಯಮಾತಿಗೆ ಈಗಾಗಲೇ ನಿರ್ಧರಿಸಿದ್ದೇವೆ. ಇಂದಿನಿಂದ ನಿಮಗೆ ಗುತ್ತಿಗೆ ಮಾಫಿಯಾದಿಂದ ಮುಕ್ತಿ ಸ್ವಾತಂತ್ರವಾಗಿದ್ದೀರಿ. ನಾ ಮಾತೆ ಶಾಸನಂ ಎಂದು ಸಿನಿಮಾ ಮಾದರಿಯಲ್ಲಿ ಡೈಲಾಗ್ ಹೇಳಿ ಪ್ರತಿಭಟನಾಕಾರರ ಮನವೊಲಿಸಿದರು.

ಗುತ್ತಿಗೆ ಕಾರ್ಮಿಕರ ಖಾಯಮಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ  ಪೌರ ಕಾರ್ಮಿಕರ ಬಳಿಕ ನನ್ನ ಮೇಲೆ ನಂಬಿಕೆ ಇಲ್ಲವೇ ಎಂದು ಪ್ರಶ್ನೆ ಕೇಳಿದ ಮೇಯರ್ ಜಿ.ಪದ್ಮಾವತಿ ಅವರು ಮುಜುಗರಕ್ಕೀಡಾದ ಘಟನೆ ನಡೆಯಿತು. ಗುತ್ತಿಗೆ ನೌಕರರ ಖಾಯಮಾತಿಗಾಗಿ ಆಗ್ರಹಿಸಿ ಬಿಬಿಎಂಪಿ ಪೌರ ಕಾರ್ಮಿಕರು ನಗರದ ಬನ್ನಪ್ಪ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಮೇಯರ್ ಪದ್ಮಾವತಿ ಅವರು ಪ್ರತಿಭಟನೆಯನ್ನು ಕೈಬಿಡಿ ಖಾಯಮಾತಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ನಮ್ಮ ಮೇಲೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪೌರ ಕಾರ್ಮಿಕರು "ನಿಮ್ಮ ಮೇಲೆ ನಂಬಿಕೆ ಇಲ್ಲ" ಎಂದು ಹೇಳಿದರು. ಇದರಿಂದ ಜಿ.ಪದ್ಮಾವತಿ ಅವರು ಕೆಲ ಕಾಲ ತಬ್ಬಿಬ್ಬಾದರು. ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ನಿಮ್ಮ ಮೇಲೆ ವಿಶೇಷ ಪ್ರೀತಿಯಿದೆ.  ಈ ಸರ್ಕಾರದ ಅವಧಿಯಲ್ಲೇ ಎಲ್ಲಾ ಗುತ್ತಿಗೆ ಕಾರ್ಮಿಕರನ್ನು ಖಾಯಮಾತಿಗೊಳಿಸುತ್ತೇವೆ.  ಖಾಯಮಾತಿಗೆ ಕೆಲ ಕಾನೂನು ಬದಲಾಯಿಸಬೇಕಿದೆ. ಹೀಗಾಗಿ ಸ್ವಲ್ಪ ತಡವಾಗಿದೆ. ಕಡ್ಡಾಯವಾಗಿ ಖಾಯಮಾತಿ ಮಾಡಲಾಗುತ್ತೆ ಎಂದರು.


ಒಂದು ಕಮೆಂಟನ್ನು ಬಿಡಿ