RSS ನಾಯಕರ ಹತ್ಯೆಗೆ ಉಗ್ರರ ಸ್ಕೆಚ್: ರಾಜ್ಯದಲ್ಲಿ ಕಟ್ಟೆಚ್ಚರ


15-10-2019 169

ಬೆಂಗಳೂರು:  ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ, ದೇಶದ ನಾನಾ ಭಾಗಗಳಲ್ಲಿ ಬಾಂಗ್ಲಾ ದೇಶದ ಉಗ್ರ ಸಂಘಟನೆ ಜಮಾಲ್ ಉಲ್ ಮುಜಾಹಿದ್ದೀನ್ ಬಾಂಗ್ಲಾ (ಜೆಎಂಬಿ) 125 ಶಂಕಿತ ಉಗ್ರರು ಸಕ್ರಿಯರಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬಹಿರಂಗಪಡಿಸಿದೆ.

ಬೆಂಗಳೂರಿನಲ್ಲಿ 20 ರಿಂದ 22 ಕಡೆಗಳಲ್ಲಿ ಉಗ್ರರ ಅಡಗುತಾಣಗಳು ಪತ್ತೆಯಾಗಿವೆ. ಕರ್ನಾಟಕ ಸೇರಿದಂತೆ, ಕೇರಳ, ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳಲ್ಲಿ 125 ಶಂಕಿತ ಉಗ್ರರು ಬೀಡುಬಿಟ್ಟಿದ್ದು, ಆರ್‍ಎಸ್‍ಎಸ್ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯನ್ನು ಎನ್‍ಐಎ, ಐಜಿ ಅಲೋಕ್ ಮಿತ್ತಲ್ ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿಂದು ನಡೆದ ಭಯೋತ್ಪಾದನಾ ವಿರೋಧಿ ಪಡೆ ಮತ್ತು ವಿಶೇಷ ಕಾರ್ಯಪಡೆಗಳ ಮುಖ್ಯಸ್ಥರ ರಾಷ್ಟ್ರೀಯ ಸಮಾವೇಶದಲ್ಲಿ ಈ ವಿಷಯವನ್ನು ಅವರು ಬಹಿರಂಗಪಡಿಸಿದರು. 2014 ಮತ್ತು 2018ರ ನಡುವೆ ಬೆಂಗಳೂರಿನಲ್ಲಿ 20ಕ್ಕೂ ಹೆಚ್ಚು ಅಡಗುತಾಣಗಳಲ್ಲಿ ಜೆಎಂಬಿ ಉಗ್ರರು ಅವಿತುಕೊಂಡಿದ್ದು, ದಕ್ಷಿಣ ಭಾರತದಾದ್ಯಂತ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಲು ಪ್ರಯತ್ನ ಮಾಡಿದ್ದಾರೆ. ಕರ್ನಾಟಕದ ಗಡಿಯಲ್ಲಿರುವ ಕೃಷ್ಣಗಿರಿ ಗುಡ್ಡಗಾಡು ಪ್ರದೇಶದಲ್ಲಿ ರಾಕೆಟ್ ಲಾಂಚರ್‍ಗಳನ್ನು ಪ್ರಾಯೋಗಿಕವಾಗಿ ಉಡಾವಣೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಜೆಎಂಬಿ ಸಂಘಟನೆಯ ಭಾರತೀಯ ಶಾಖೆಯನ್ನು ಪ್ರಾರಂಭಿಸುವ ಬಗ್ಗೆ ಬೆಂಗಳೂರಿನಲ್ಲಿ ಜೆಎಂಬಿ ಸಭೆಗಳು ನಡೆದಿದ್ದು, ಈ ಶಾಖೆಯ ಮುಖ್ಯಸ್ಥ ಯಾರಾಗಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂಬ ಮಾಹಿತಿಯನ್ನು ಅವರು ಹೊರಹಾಕಿದರು.

ಬಾಂಗ್ಲಾ ದೇಶದಲ್ಲಿ ಸಕ್ರಿಯರಾಗಿರುವ ಉಗ್ರರು, ದೇಶದ ವಿವಿಧ ಭಾಗಗಳಲ್ಲಿ ಅವಿತುಕೊಂಡಿದ್ದು, ಯಾವುದೇ ಗಳಿಗೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಬಹುದಾಗಿದೆ. ಈ ಬಗ್ಗೆ ಕಟ್ಟೆಚ್ಚರ ವಹಿಸಬೇಕೆಂದು ರಾಜ್ಯ ಸರ್ಕಾರಗಳಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಗೆ ದೊರೆತಿರುವ ಮಾಹಿತಿಯನ್ನು ರವಾನಿಸಿದೆ. ವಿಶೇಷವಾಗಿ ಆರ್‍ಎಸ್‍ಎಸ್ ನಾಯಕರನ್ನು ಗುರಿಯಾಗಿಸಿಕೊಂಡು, ಸಂಚು ರೂಪಿಸಿರುವ ಉಗ್ರರ ಚಲನವಲನಗಳ ಬಗ್ಗೆ ನಿಗಾವಹಿಸಬೇಕೆಂದು ತನಿಖಾ ಸಂಸ್ಥೆಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಎನ್‍ಐಎ ಮಾಹಿತಿ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ, ಹಲವು ರಾಜ್ಯಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿ ಹೆಚ್ಚಿನ ಬಿಗಿಭದ್ರತೆಯನ್ನು ಒದಗಿಸಲಾಗಿದೆ. ಬೆಂಗಳೂರು ಸೇರಿದಂತೆ, ರಾಜ್ಯದ ಎಲ್ಲಾ ಮೆಟ್ರೋ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆಗಳು, ಮಾಲ್‍ಗಳು ಸೇರಿದಂತೆ, ಜನನಿಬಿಡ ಪ್ರದೇಶಗಳಲ್ಲಿ ಪೆÇಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹೊರರಾಜ್ಯಗಳಿಂದ ಬಂದುಹೋಗುವ ವ್ಯಕ್ತಿಗಳ ಪೈಕಿ ಅನುಮಾನ ಬಂದವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಅವರ ಚಲನ-ವಲನಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಲು ಪೆÇಲೀಸರನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ, ಪಾಕಿಸ್ತಾನ ಸೇರಿದಂತೆ, ಮುಸ್ಲಿಂ ರಾಷ್ಟ್ರಗಳಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳ ಉಗ್ರರು ದೇಶದ ಹಲವೆಡೆಗೆ ನುಸುಳಿ ಬಂದಿದ್ದಾರೆ ಎನ್ನುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಕಟ್ಟೆಚ್ಚರ ವಹಿಸಿತ್ತು. ಇದೇ ಹಿನ್ನೆಲೆಯಲ್ಲಿ ಈ ಮಾಹಿತಿಯನ್ನು ರಾಜ್ಯ ಸರ್ಕಾರಗಳಿಗೆ ರವಾನಿಸಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ, ಕಟ್ಟೆಚ್ಚರ ವಹಿಸಬೇಕೆಂದು ಎನ್‍ಐಎ ಸೂಚನೆ ನೀಡಿದೆ.

ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್. ರಾಜು, ಎಲ್ಲಾ ಪೊಲೀಸ್ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿ, ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ, ಆಯಕಟ್ಟಿನ ಜಾಗಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವಂತೆ, ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅವರ ಸೂಚನೆಯಂತೆ, ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ನಗರದಲ್ಲಿನ ಮೆಟ್ರೋ, ರೈಲು ನಿಲ್ದಾಣ, ಬಸ್ ನಿಲ್ದಾಣ, ಮಾಲ್‍ಗಳು, ಕೆ.ಆರ್. ಮಾರುಕಟ್ಟೆ, ಎಪಿಎಂಸಿ ಯಾರ್ಡ್ ಸೇರಿದಂತೆ, ಪ್ರಮುಖ ಕಚೇರಿಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Terrorist Bangalore RSS Bhaskar Rao