ನದಿ ನೀರು ಸಂಗ್ರಹಕ್ಕೆ ಮಹತ್ವದ ಯೋಜನೆ


06-09-2019 177

ಬೆಂಗಳೂರು: ಕಾವೇರಿ-ಕೃಷ್ಣಾ ನದಿಗಳು ಸೇರಿದಂತೆ ರಾಜ್ಯಾದ್ಯಂತ ಇರುವ ನದಿ ಪಾತ್ರಗಳಲ್ಲಿ ಪ್ರವಾಹ ಉಂಟಾದಾಗ ಮೂವತ್ತರಿಂದ ನಲವತ್ತು ಟಿಎಂಸಿಗಳಷ್ಟು ನೀರನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.

ಪ್ರವಾಹ ಪೀಡಿತ ಪರಿಸ್ಥಿತಿಯಲ್ಲಿ ಲಭ್ಯವಾಗುವ ನೀರಿನಲ್ಲಿ ಮೂವತ್ತರಿಂದ ನಲವತ್ತು ಟಿಎಂಸಿ ನೀರನ್ನು ಪಡೆದು ಪ್ರತ್ಯೇಕವಾಗಿ ಸಂಗ್ರಹಿಸಿಟ್ಟುಕೊಂಡರೆ ಬರಗಾಲದ ಸನ್ನಿವೇಶದಲ್ಲಿ ರಾಜ್ಯಕ್ಕೆ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬಹುದು ಎಂಬುದು ಇದರ ಉದ್ದೇಶ.

ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸಣ್ಣ ನೀರಾವರಿ,ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಈ ವಿಷಯ ತಿಳಿಸಿದರು.

ಪ್ರವಾಹ ಪೀಡಿತ ಪರಿಸ್ಥಿತಿಯಲ್ಲಿ ಲಭ್ಯವಾಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಉದ್ದೇಶದಿಂದ ರಾಜ್ಯಾದ್ಯಂತ ಹೆಚ್ಚುವರಿಯಾಗಿ ಬ್ಯಾರೇಜ್‍ಗಳನ್ನು ನಿರ್ಮಿಸುವುದು ಸೇರಿದಂತೆ ಹಲ ಜಲಸಂಗ್ರಹಾಗಾರಗಳನ್ನು ಸ್ಥಾಪಿಸಬೇಕು ಎಂಬ ಕುರಿತು ಚಿಂತನೆ ನಡೆದಿದೆ ಎಂದರು.

ಇಂದಿನ ಸಚಿವ ಸಂಪುಟ ಸಭೆಯಲ್ಲಿ ಶಿಕಾರಿಪುರ,ಚಿತ್ರದುರ್ಗ,ದಾವಣಗೆರೆ,ಭರಮಸಾಗರ ಸೇರಿದಂತೆ ಹಲವು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು ನೂರು ಕೆರೆಗಳನ್ನು ಭರ್ತಿ ಮಾಡುವ ಒಂದು ಸಾವಿರ ಕೋಟಿ ರೂಗಳ ಯೋಜನೆಗೆ ಆಡಳಿತಾತ್ಮಕ ಅಂಗೀಕಾರ ನೀಡಲಾಗಿದೆ.

 ಸದರಿ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ಒದಗಿಸಲಾಗುವುದು.ಹಾಗೆಯೇ ರಾಜ್ಯದ ಉಳಿದ ನದಿ ಪಾತ್ರಗಳಿಂದಲೂ ಆಯಾ ವ್ಯಾಪ್ತಿಯಲ್ಲಿರುವ 35 ಸಾವಿರ ಕೆರೆಗಳಿಗೆ ನೀರು ಹರಿಸುವ ಕೆಲಸಗಳಿಗೆ ಆದ್ಯತೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ ಎಂದರು.

ಇದು ಒಂದು ಭಾಗವಾದರೆ ಪ್ರವಾಹದಂತಹ ಸನ್ನಿವೇಶದಲ್ಲಿ ಅಪಾರ ಪ್ರಮಾಣದ ನೀರು ಹೊರಹೋಗುತ್ತದೆ.ಮಹಾರಾಷ್ಟ್ರದಿಂದ ಹೆಚ್ಚುವರಿಯಾಗಿ ಬರುವ ನೀರನ್ನು ಬೇಡ ಎನ್ನಲು ಸಾಧ್ಯವಿಲ್ಲ.ಅದೇ ರೀತಿ ಯಾವ ಕಡೆಯಿಂದ ನೀರು ಹೆಚ್ಚುವರಿಯಾಗಿ ಲಭ್ಯವಾದರೂ ಬೇಡ ಎನ್ನಲು ಸಾಧ್ಯವೇ ಇಲ್ಲ.

ಅದರ ಬದಲು ಲಭ್ಯವಾಗುವ ಹೆಚ್ಚುವರಿ ನೀರಿನಲ್ಲಿ ಮೂವತ್ತರಿಂದ ನಲವತ್ತು ಟಿಎಂಸಿ ನೀರನ್ನು ಆಯಾ ನದಿ ವ್ಯಾಪ್ತಿಯ ಪ್ರದೇಶಗಳಲ್ಲಿ ಸಂಗ್ರಹಿಸಿಟ್ಟರೆ ಬರಗಾಲದಂತಹ ಸನ್ನಿವೇಶದಲ್ಲಿ ಎದುರಾಗುವ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಸಾಧ್ಯವಾಗುತ್ತದೆ.

ಆದರೆ ಈ ಯೋಜನೆಗೆ ಅಪಾರ ಪ್ರಮಾಣದ ಹಣ ಬೇಕು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರವಾಹ ಪೀಡಿತ ಸನ್ನಿವೇಶದಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಿಸುವ ಕೆಲಸಕ್ಕೆ ಆದ್ಯತೆ ನೀಡುವುದಾಗಿ ಅವರು ತಿಳಿಸಿದರು.


ಒಂದು ಕಮೆಂಟನ್ನು ಬಿಡಿ

ಸಂಬಂಧಿತ ಟ್ಯಾಗ್ಗಳು

Madhuswamy Cauvery River Krishna